ವಾರದ ಕವಿತೆ

ಮಿಣುಕುಹುಳ

ವಿಜಯಶ್ರೀ ಹಾಲಾಡಿ

ನಡುರಾತ್ರಿ
ಒಗೆದ ಬಟ್ಟೆಗಳ ಹರಡಿ
ಅಡುಗೆಮನೆ ಶುಚಿಗೊಳಿಸಿ
ಹೊದಿಕೆ ಜೋಡಿಸಿಕೊಂಡು
ಮಲಗುವ ಮುನ್ನ
ಸಣ್ಣದೊಂದು ಬ್ಯಾಟರಿ ಬೆಳಕು
ಹಾಕಿಕೊಂಡು ಮನೆಯೆಲ್ಲ
ತಿರುಗಿ ಬರಬೇಕೆನಿಸಿತು

ಮಗುವಿನಂತೆ ನಿದ್ರಿಸಿದ ಮನೆ
ಮನೆಮಂದಿ, ಕಗ್ಗತ್ತಲ ಜಗ….!
ಕಪ್ಪೆ ಜೀರುಂಡೆ ಕೀಟಾದಿಗಳು
ಮೌನದೊಂದಿಗೆ ಸಂವಾದದಲ್ಲಿದ್ದವು
ಸುರಿದು ಸಾಕಾಗಿ ಬಿಟ್ಟ ಮಳೆಗೆ
ನೆಲವೆಲ್ಲ ಥಂಡಿ ಶೀತ
ಕಿಟಕಿಯಾಚೆಯ ಮಿಣುಕುಹುಳಗಳ
ಜೊತೆ – ನಾನೇ ಒಂದು
ಮಿಂಚುಹುಳವೆಂದು ಭ್ರಮಿಸುತ್ತ
ಕೋಣೆ ಕೋಣೆಗಳ ಸುತ್ತಾಡಿದೆ
ಪಾದದುಸುರಿಗೆ ಬೆಚ್ಚಿದ ಹಲ್ಲಿ
ಜಿರಳೆಗಳು ಮರೆಗೆ ಸರಿದವು
ದೂರದಲ್ಲೆಲ್ಲೋ ನಾಯಿಯೊಂದು
ಗೊಣಗುತ್ತ ಮಲಗುವ ಸೂಚನೆ ರವಾನಿಸುತ್ತಿರುವಾಗಲೇ…..
ಮಿಣುಕುಹುಳವೊಂದು ಮಿಣಿಮಿಣಿ
ಯೆಂದು ತೇಲಿಬಂದಿತು
….ಮನೆಯೊಳಗೇ!!
ಅಜ್ಜಿ ನೆನಪಿಸುತ್ತಿದ್ದ ‘ಜಕ್ಣಿ’ಯ ಕತೆ
-ಗಳು ನುಗ್ಗಿಬಂದು ಕೈದೀಪವಾರಿಸಿದೆ!
…….
ವಟಗುಟ್ಟುವ ಕಪ್ಪೆಗಳು
ಕಣ್ಣ ಹಿತ ನೇವರಿಸುವ ಮಸಿಕತ್ತಲು!
**

ಟಿಪ್ಪಣಿ- ಮನೆಯೊಳಗೆ ಬರುವ ಮಿಂಚುಹುಳವನ್ನು ಆ ಮನೆಗೆ ಸಂಬಂಧಿಸಿದ ಹಿರಿಯರ ಜಕ್ಣಿ ಎಂದು ಜನಪದರು ಗುರುತಿಸುತ್ತಾರೆ.
ಜಕ್ಣಿ– ಸತ್ತವರ ಆತ್ಮ/ ಪ್ರೇತ
.

*************************

Leave a Reply

Back To Top